ಶರ್ಮ, ನರೇಂದ್ರ
	1913-. ಆಧುನಿಕ ಹಿಂದಿಯ ಛಾಯಾವಾ ದೋತ್ತರ ಕಾಲದ ಪ್ರಾತಿನಿಧಿಕ ಕವಿ. ಛಾಯಾವಾದಿ ಕಾವ್ಯಪ್ರವೃತ್ತಿಗಳಿಂದ ಪ್ರಭಾವಿತರಾಗಿ ಆ ಕಾವ್ಯಧಾರೆಯಿಂದ ಪ್ರೇರಣೆ ಹಾಗೂ ಸ್ಫೂರ್ತಿ ಪಡೆದುಕೊಂಡದ್ದುಂಟಾದರೂ ಮುಂದೆ ಕಾವ್ಯವನ್ನು ಕೇವಲ ಕಲ್ಪನೆಯ ಸೃಷ್ಟಿ ಮಾತ್ರವಾಗಿಸದೆ ಸಮಾಜಕ್ಕೆ ಅದು ಬದ್ಧವಾಗಿರಬೇಕೆಂಬ ನಿಲುವನ್ನು ತಾಳಿದ ಶರ್ಮರ ಕಾವ್ಯ, ಪ್ರಗತಿಶೀಲ ಧೋರಣೆಗಳಿಂದ ವ್ಯಾಪಕವಾಗಿ ಪ್ರಭಾವಿತಗೊಂಡಿದೆ.

	ಇವರು 1913 ಫೆಬ್ರುವರಿ 28ರಂದು ಜಹಾಂಗಿರ್‍ಪುರದಲ್ಲಿ ಜನಿಸಿದರು. ತಂದೆ ಪೂರನ್‍ಮಲ್ ಶರ್ಮ, ತಾಯಿ ಗಂಗಾದೇವಿ. ಚಿಕ್ಕಂದಿನಲ್ಲೇ ತಂದೆ ತೀರಿಕೊಂಡದ್ದರಿಂದ ದೊಡ್ಡಪ್ಪನವರ ಪ್ರೀತಿಯ ಆಸರೆಯಲ್ಲಿ ಬಾಲ್ಯ ಕಳೆಯಿತು. ಮನೆಯಲ್ಲಿಯೇ ಆರಂಭವಾದ ಅಕ್ಷರಾಭ್ಯಾಸದ ಜೊತೆಗೆ ಸತ್ಯಾರ್ಥ ಪ್ರಕಾಶದ ಓದು ಹಾಗೂ ಆಗ ಬರುತ್ತಿದ್ದ ಪ್ರತಾಪ್ ಪತ್ರಿಕೆಯ ಪ್ರೇರಣಾತ್ಮಕ ಲೇಖನಗಳಿಂದ ದೇಶಭಕ್ತಿಯತ್ತ ಇವರ ಒಲವು ಬೆಳೆಯಿತು. 1929ರಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸುವಷ್ಟರ ಹೊತ್ತಿಗೆ ಹಿಂದಿ ಪ್ರಥಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಮುಂದೆ ವಿಶ್ವವಿದ್ಯಾಲಯ ಶಿಕ್ಷಣ ಪಡೆಯಲು ಅಲಹಾಬಾದ್‍ಗೆ ಬಂದಾಗ ಇವರಲ್ಲಿದ್ದ ಸಾಹಿತ್ಯಕ ಪ್ರತಿಭೆಗೆ ಇಂಬು ದೊರೆತು ಕಾವ್ಯರಚನೆಯತ್ತ ಒಲವು ಮೂಡಲಾ ರಂಭಿಸಿತು. ಇದಕ್ಕೆ ಆಸರೆಯಾಗಿ ಹರಿವಂಶರಾಯ್ ಬಚ್ಚನ್, ಸುಮಿತ್ರಾ ನಂದನ್ ಪಂತ್, ಭಗವತೀಚರಣವರ್ಮಾರವರ ಸ್ನೇಹ ಲಭ್ಯವಾಯಿತು. 1936ರಲ್ಲಿ ಇಂಗ್ಲಿಷ್ ಎಂ.ಎ. ಮುಗಿಸಿ 1937ರಲ್ಲಿ ಪ್ರಯಾಗ್‍ನ ಲೀಡರ್ ಪ್ರೆಸ್‍ನಿಂದ ಪ್ರಕಟವಾಗುತ್ತಿದ್ದ ಭಾರತ್ ಪತ್ರಿಕೆಯ ಸಂಪಾದಕ ಮಂಡಳಿ ಸೇರಿದರು. ಮುಂದಿನ ಕೆಲವು ದಿನಗಳಲ್ಲಿಯೇ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೇಂದ್ರ ಕಚೇರಿಯಲ್ಲಿ ನೇಮಕವಾದರು. ಅಲ್ಲಿ ಎರಡು ವರ್ಷಗಳ ಕಾಲ ನೆಹರೂರವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಅನಂತರ ಸುಮಿತ್ರಾನಂದನ್ ಪಂತ್‍ರವರ ಸಂಪಾದ ಕತ್ವದಲ್ಲಿ ಪ್ರಕಟವಾಗುತ್ತಿದ್ದ ರೂಪಾಭ್ ಪತ್ರಿಕೆಯ ಸಹಸಂಪಾದಕರಾಗಿ ಸೇರಿದರು. 1940ರಲ್ಲಿ ಕಾಶಿ ವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ ನೇಮಕ ಗೊಂಡು ಬನಾರಸ್‍ಗೆ ಬಂದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಶರ್ಮರು ಸಾಹಿತ್ಯದಲ್ಲಿ ಅಭಿರುಚಿ ರೂಢಿಸಿಕೊಂಡಂತೆಯೇ ರಾಜಕೀಯದತ್ತಲೂ ಒಲವು ತೋರಲಾರಂಭಿಸಿದರು. ಸಕ್ರಿಯ ರಾಜಕೀಯದಲ್ಲಿ ಭಾಗವಹಿಸ ಲಾರಂಭಿಸಿದರು. ನೌಜವಾನ್ ಭಾರತ್ ಸಭಾದ ಸಕ್ರಿಯ ಸದಸ್ಯರಾಗಿ, ಕೆಲಕಾಲ ಅದರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1940ರ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದರು. ಈ ಅವಧಿಯಲ್ಲಿ ಇವರಿಗೆ ಸಂಪೂರ್ಣಾನಂದ್, ರಾಹುಲ್ ಸಾಂಕೃತ್ಯಾಯನ್, ಶಚೀಂದ್ರನಾಥ್ ಸನ್ಯಾಲ್‍ರವರ ಪರಿಚಯವಾಯಿತು.

	ಇವರು ಚಲನಚಿತ್ರ ಪ್ರಪಂಚಕ್ಕೆ ಬಂದದ್ದು ಇವರ ಬದುಕಿನಲ್ಲಿಯ ಮಹತ್ತ್ವದ ಘಟನೆ. ಭಗವತೀಚರಣವರ್ಮಾರವರ ಸ್ನೇಹದಿಂದಾಗಿ ಮುಂಬಯಿಗೆ ಬಂದು ಚಲನಚಿತ್ರಗಳಿಗೆ ಗೀತೆಗಳನ್ನು ಬರೆಯತೊಡಗಿದರು. ಚಲನಚಿತ್ರಗಳಿಗೆ ಇವರು ಬರೆದ ಗೀತೆಗಳು ಉನ್ನತ ಸಾಹಿತ್ಯಕ ಮೌಲ್ಯ ಪಡೆದಿವೆ. 1954ರಲ್ಲಿ ಆಕಾಶವಾಣಿಗೆ ಸೇರಿದ ಇವರು ಮೊದಲು ಮುಂಬಯಿ ಕೇಂದ್ರದಲ್ಲಿ ಸುಗಮ ಸಂಗೀತ ಹಾಗೂ ಹಿಂದಿ ಕಾರ್ಯ ಕ್ರಮಗಳ ನಿರ್ವಾಹಕರಾಗಿ ಅನಂತರ ವಿವಿಧ ಭಾರತಿಯ ಪ್ರಮುಖರಾದರು. ಕೆಲಕಾಲ ಇವರು ದೆಹಲಿ ಕೇಂದ್ರದಲ್ಲಿಯೂ ಕಾರ್ಯ ನಿರ್ವಹಿಸಿದರು.

	ಕವಿಯಾಗಿ ಇವರು ಶೂಲ್‍ಪೂಲ್, ಕರ್ಣ್‍ಪೂಲ್, ಪ್ರಭಾತ್ ಫೇರಿ, ಪ್ರವಾಸಿ ಕೇ ಗೀತ್, ಪಲಾಶ್‍ವನ್, ಮಿಟ್ಟೀ ಔರ್ ಪೂಲ್, ಕಾಮಿನಿ, ಹಂಸಮಾಲಾ, ರಕ್ತಚಂದನ್, ಅಗ್ನಿಶಸ್ಯ, ಕದಲೀವನ್, ದ್ರೌಪದಿ, ಪ್ಯಾಸಾನಿರ್ಝರ್, ಉತ್ತರ್‍ಜಯ್ ಸುವರ್ಣಾ, ಸುವೀರಾ ಮೊದಲಾದ ಕಾವ್ಯಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಕಾವ್ಯ, ಕಲ್ಪನೆ ಹಾಗೂ ಭಾವುಕತೆಯಿಂದ ಮೇಲೇರಿ ಬದುಕಿನ ವಾಸ್ತವಿಕ ನೆಲಗಟ್ಟು ಪಡೆದು ಕೊಂಡಿದೆಯಲ್ಲದೆ ವೈಚಾರಿಕತೆ ಹಾಗೂ ಆಧ್ಯಾತ್ಮಿಕತೆಯನ್ನು ಗಾಢವಾಗಿ ಮೈಗೂಡಿಸಿಕೊಂಡಿದೆ. ಪ್ರವಾಸೀಕೇಗೀತ್‍ನಲ್ಲಿಯ ಸುಂದರ ಮಧುರ ಪ್ರೇಮಗೀತೆಗಳಿಂದ ಇವರು ಹಿಂದಿ ಛಾಯಾವಾದೋತ್ತರ ಕವಿಗಳಲ್ಲಿ ಪ್ರಮುಖರಾಗಿದ್ದಾರೆ. ಪ್ರಿಯತಮೆಯಿಂದ ದೂರಾದ ಪ್ರಿಯತಮನ ವಿರಹದ ಅಳಲು ಈ ಸಂಗ್ರಹದ ಗೀತೆಗಳಲ್ಲಿ ಪಡಿಮಿಡಿಯುತ್ತದೆ. ಮಾನವನ ಬದುಕಿಗೆ ಪ್ರೇಮ ಎಂಥ ತೀವ್ರತೆಯನ್ನೂ ತನ್ಮಯತೆಯನ್ನೂ ತಂದುಕೊಡಬಲ್ಲುದು ಎಂಬುದಕ್ಕೆ ಇಲ್ಲಿಯ ಕವಿತೆಗಳು ಸಾಕ್ಷಿಯಾಗಿವೆ. ಪಲಾಶ್‍ವನ್ ಛಾಯಾವಾದಿ ಪ್ರವೃತ್ತಿಗಳಿಗೆ ಪ್ರತಿನಿಧಿಯಾಗಬಲ್ಲಂಥ ಕೃತಿ. ಇಲ್ಲಿ ಪ್ರಕೃತಿಯ ಮೋಹಕ ಚಿತ್ರಣವಿದೆ. ಹಂಸಮಾಲಾ ಚಿಂತನ ಪ್ರಧಾನ ಕೃತಿ. ಎರಡನೆಯ ಮಹಾಯುದ್ಧದ ಘಟನೆಗಳಿಂದ ಪ್ರಭಾವಿತ ವಾಗಿರುವ ಇಲ್ಲಿಯ ಕವಿತೆಗಳು ತತ್ಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿವೆ. ಇವರ ಮಹತ್ತ್ವದ ಕೃತಿಗಳಲ್ಲಿ ದ್ರೌಪದಿ ಎಂಬ ಖಂಡಕಾವ್ಯವೂ ಒಂದು. ಇದೊಂದು ರೂಪಕ ಕಾವ್ಯ. ಇಲ್ಲಿ ದ್ರೌಪದಿ ಜೀವನಶಕ್ತಿ. ಯುಧಿಷ್ಠಿರ-ಆಕಾಶತತ್ತ್ವ, ಭೀಮ-ಪ್ರಾಣತತ್ತ್ವ, ಅರ್ಜುನ-ಅಗ್ನಿತತ್ತ್ವ, ನಕುಲ ಜಲತತ್ತ್ವ, ಸಹದೇವ ಭೂಮಿತತ್ತ್ವ- ಈ ಐದು ಮಹಾತತ್ತ್ವಗಳಿಗೆ ಆಕೆ ಚೈತನ್ಯ ಕೊಟ್ಟಿದ್ದಾಳೆ. ಪೌರಾಣಿಕ ಪ್ರಸಂಗ ಹಾಗೂ ಪಾತ್ರಗಳನ್ನು ತೆಗೆದುಕೊಂಡು ರೂಪಕಾಲಂಕಾರದ ಆಧಾರದ ಮೇಲೆ ಮಾನವನ ಬದುಕಿನ ಕೆಲವು ಶಾಶ್ವತ ಮೌಲ್ಯಗಳನ್ನು ಕುರಿತು ಚಿಂತಿಸುವ ಪ್ರಯತ್ನ ಈ ಕಾವ್ಯದಲ್ಲಿದೆ.

	ಗಾಂಧೀ ಇವರ ಬದುಕಿನ ಆದರ್ಶ ವ್ಯಕ್ತಿ. ಹಾಗಾಗಿ ಗಾಂಧೀ ವಿಚಾರಧಾರೆಯ ಪ್ರಭಾವವೂ ಇವರ ಕಾವ್ಯದ ಮೇಲೆ ದಟ್ಟವಾಗಿ ಆಗಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
			
							(ಟಿ.ಎಚ್.ಐ.)